ತಿಮ್ಮಾಮಾತ್ಯ
ಸು. 1750. ಶ್ರೀವೈಷ್ಣವ ಕವಿ. ತಿಮ್ಮಯ್ಯನೆಂಬ ಹೆಸರೂ ಉಂಟು. ಇವನ ಪಿತಾಮಹ ಶೇಷಾರ್ಯ. ತಂದೆ ವೆಂಕಟಾಧಿಪ. ರಾಮಾಭ್ಯುದಯ ಕಥಾಕುಸುಮ ಮಂಜರಿ ಎಂಬ ಕಾವ್ಯವನ್ನು ತನ್ನ ಇಷ್ಟದೈವವಾದ ಆನೇಕಲ್ಲು ತಾಲ್ಲೂಕು ಸಹದೇವಪುರವರ (ಸಾದನಹಳ್ಳಿ) ವೆಂಕಟರಮಣನ ಅಂಕಿತದಿಂದ ಈತ ಬರೆದಿದ್ದಾನೆ. 

ರಾಮಾಭ್ಯುದಯ ಕಥಾಕುಸುಮ ಮಂಜರಿ 7 ಕಾಂಡ 78 ಸಂಧಿ 3,446 ಪದ್ಯಗಳನ್ನೊಳಗೊಂಡಿದ್ದು ಭಾಮಿನೀ ಷಟ್ಪದಿಯಲ್ಲಿದೆ. ಇತರ ರಾಮಾಯಣಗಳ ಸಾರವನ್ನೆಲ್ಲ ಇದು ಒಳಗೊಂಡಿದೆ. ವರಾಹವೃಸಿಂಹಾವತಾರಗಳ ಮತ್ತು ರಾವಣ ದಿಗ್ವಿಜಯದ ಕಥೆಗಳು ಬಾಲಕಾಂಡದಲ್ಲೂ ಶ್ರೀರಾಮನ ರಾಜ್ಯಭಾರ, ದಿಗ್ವಿಜಯ, ಅಶ್ವಮೇದ ಮೊದಲಾದ ಕಥೆಗಳು ಉತ್ತರಕಾಂಡದಲ್ಲೂ ಬಂದಿವೆ.							(ಟಿ.ಬಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ